Kahaar
    What's Hot

    मृदा स्‍वास्‍थ्‍य कार्ड: किसानों के लिए योजना

    March 2, 2025

    Cosmic farming as an alternative for better crop health

    February 18, 2025

    लखनऊ की दस नदियां जो जुडी थी बड़ी झीलों से

    November 14, 2024
    Facebook Twitter Instagram
    Thursday, May 15
    Trending
    • मृदा स्‍वास्‍थ्‍य कार्ड: किसानों के लिए योजना
    • Cosmic farming as an alternative for better crop health
    • लखनऊ की दस नदियां जो जुडी थी बड़ी झीलों से
    • High Pressure Processing in the Food Industry: A Revolutionary Approach to Food Preservation and Quality Enhancement
    • पुनर्जीवित सैरनी दुनिया को शांति की सीख देती है।
    • Environmental and Health Impacts of Uranium Mining in Jadugoda, Jharkhand
    • Sustainable Solutions for Global Land Degradation: Natural Farming Perspectives
    • Soil Pollution from Mining Activities: Impact on Living Organisms
    • Print Edition
    • Get In Touch
    • About Us
    Facebook Twitter Instagram
    KahaarKahaar
    Subscribe
    • Home
    Kahaar
    Home»Uncategorized»ಕಲ್ಲು‌ಹೂವುಗಳು (ಲೈಕನ್‌ಗಳು) – ಜೀವಗಳೆರಡು ದೇಹ ಒಂದೇ
    Uncategorized

    ಕಲ್ಲು‌ಹೂವುಗಳು (ಲೈಕನ್‌ಗಳು) – ಜೀವಗಳೆರಡು ದೇಹ ಒಂದೇ

    ಡಾ. ಸಂಜೀವ ನಾಯಕ, ಹಿರಿಯ ಪ್ರಧಾನ ವಿಜ್ಞಾನಿ
    Share
    Facebook Twitter Reddit Pinterest Email

    ಕಲ್ಲು‌ಹೂವುಗಳು ಎಂದರೇನು?

    ಕಲ್ಲುಹೂವುಗಳು ಸಹಜೀವನಕ್ಕೆ ಒಂದುಅತ್ಯುತ್ತಮ ಉದಾಹರಣೆ. ಅವುಗಳು ಏಕ ಜೀವಿಯಂತೆ ಕಾಣಿಸಿದರೂ ವಾಸ್ತವದಲ್ಲಿ ಎರಡು ಜೀವಿಗಳಿಂದ ರಚನೆಯಾಗಿವೆ. ಹೊರಗಡೆಯಿಂದ ಕಾಣಿಸುತ್ತಿರುವುದು ಶಿಲೀಂಧ್ರವಾಗಿದ್ದು ಅದರ ದೇಹದೊಳಗೆ ಪಾಚಿಯು ಅಡಗಿರುತ್ತದೆ. ಆದ್ದರಿಂದ, ಕಲ್ಲುಹೂವುಗಳನ್ನು ’ಡ್ಯುಯಲ್ ಆರ್ಗ್ಯಾನಿಸಂ ಅಥವಾ ಉಭಯ ಜೀವಿ’ ಎಂದು ಕರೆಯಲಾಗುತ್ತದೆ. ಶಿಲೀಂಧ್ರ ಮತ್ತು ಪಾಚಿಯ ನಡುವಿನ ಸಂಬಂಧವನ್ನು ಗಂಡ ಮತ್ತು ಹೆಂಡತಿಯ ಸಂಬಂಧಕ್ಕೆ ಹೋಲಿಸಬಹುದಾಗಿದೆ. ಶಿಲೀಂಧ್ರವು ಒಬ್ಬ ಗಂಡನಂತೆ ನೀರು ಮತ್ತು ಖನಿಜಗಳನ್ನು ಪಾಚಿಗೆ ಪೂರೈಸುತ್ತದೆ. ಹಾಗೆಯೇ ಒಬ್ಬ ಹೆಂಡತಿಯಂತೆ ಪಾಚಿಯು ದ್ಯುತಿಸಂಶ್ಲೇಷಣಾ ಕ್ರಿಯೆಯ ಮೂಲಕ ಆಹಾರವನ್ನು ಸಿದ್ಧಪಡಿಸುತ್ತದೆ ಹಾಗೂ ಇಡೀ ಕಲ್ಲುಹೂವಿನ ಪೌಷ್ಟಿಕಾಂಶದ ಸಮತೋಲನವನ್ನು ಕಾಯ್ದುಕೊಳ್ಳುತ್ತದೆ. ಶಿಲೀಂಧ್ರವು ಪಾಚಿಗೆ ಆಶ್ರಯ ಮತ್ತು ರಕ್ಷಣೆಯನ್ನೂ ಸಹ ನೀಡುತ್ತದೆ. ಇತ್ತೀಚಿನ ದಿನಗಳಲ್ಲಿ ಕಲ್ಲುಹೂವುಗಳನ್ನು ’ಸೂಕ್ಷ್ಮ-ಪರಿಸರವ್ಯವಸ್ಥೆ’ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ, ಮೂಲತಃ ಶಿಲೀಂಧ್ರ ಮತ್ತು ಪಾಚಿಯಿಂದ ಕೂಡಿ ರಚನೆಯಾದ ಕಲ್ಲುಹೂವುಗಳ ಜೊತೆಯಲ್ಲಿ ಹಲವಾರು ಬೇರೆ ಶಿಲೀಂಧ್ರಗಳು, ಪಾಚಿಗಳು, ಬ್ಯಾಕ್ಟೀರಿಯಾಗಳು, ಆಕ್ಟಿನೋಮೈಸೆಟ್‌ಗಳು ಮತ್ತು ಸೂಕ್ಷ್ಮ-ಅಕಶೇರುಕಗಳು ನಿಕಟ ಸಂಬಂಧವನ್ನು ಹೊಂದಿರುತ್ತವೆ.

     

    ಕಲ್ಲುಹೂವುಗಳಿಗಿರುವ ವಿವಿಧ ಹೆಸರುಗಳು

    ಕಲ್ಲುಹೂವುಗಳನ್ನು ಆಂಗ್ಲ ಭಾಷೆಯಲ್ಲಿ ಲೈಕನ್‌ಗಳು, ಓಕ್ ಮೋಸ್, ರೈನ್‌ಡೀರ್ ಮೋಸ್, ಐಸ್‌ಲ್ಯಾಂಡ್ ಮೋಸ್ ಮತ್ತು ರಾಕ್ ಮೋಸ್ ಎಂದು; ಸಂಸ್ಕೃತದಲ್ಲಿ – ಶಿಲಾಪುಷ್ಪ್, ಶಾಯಿಲ್ಯ, ಶಿಫಾಲ್; ಹಿಂದಿಯಲ್ಲಿ – ಪತ್ತರ್ ಕಾ ಫೂಲ್, ಶೈಕ್; ಮರಾಠಿ ಮತ್ತು ಕೊಂಕಣಿ ಭಾಷೆಯಲ್ಲಿ – ಧಗಡ್ ಫೂಲ್; ತಮಿಳು ಮತ್ತು ಮಲಯಾಳಂನಲ್ಲಿ – ಕಲ್ ಪಾಸಿ, ಕಲ್ ಜಡೈ, ಕಲ್ ತಾಮರ; ತೆಲುಗು ಭಾಷೆಯಲ್ಲಿ – ರಾತಿ ಪಾಚೇ, ರಾತಿ ಪೂ; ಉತ್ತರಾಖಂಡ್ ನಲ್ಲಿ – ಛಡಿಲಾ, ಝೋಲಾ ಘಾಸ್; ಬೆಂಗಾಳಿ ಭಾಷೆಯಲ್ಲಿ – ಷೇಲಾಜ್; ಕಶ್ಮೀರೀ ಭಾಷೆಯಲ್ಲಿ – ಪಂ ರೋಸ್; ಪಂಜಾಬಿ ಭಾಷೆಯಲ್ಲಿ – ಚಲ್ ಛಬಿಲಾ, ಚಡ್ ಛಡಿಲಾ; ಅಸ್ಸಾಂ ಮತ್ತು ಸಿಕ್ಕಿಂಗಳಲ್ಲಿ – ಜೌವೂ; ಉರ್ದು ಭಾಷೆಯಲ್ಲಿ – ಹಬಾಕ್ಕಾರಮಣಿ, ರಿಹಾನ್ ಕರ್ಮಾನಿ; ಗುಜರಾತಿ ಭಾಷೆಯಲ್ಲಿ – ಛಬಿಲೋ, ಪಥರ್‌ ಫುಲಾ, ಛಡಿಲೋ; ಹಿಮಾಚಲಿದಲ್ಲಿ – ಮೆಹೆಂದೀ ಹೀಗೆ ಹಲವಾರು ಹೆಸರುಗಳಿಂದ ಕರೆಯುತ್ತಾರೆ. ಬಹುತೇಕ ಭಾಷೆಗಳಲ್ಲಿ ಲೈಕನ್‌ಗಳನ್ನು ಸ್ಟೋನ್ ಫ್ಲವರ್ ಅಥವಾ ಕಲ್ಲುಹೂವುಗಳು ಎಂದು ಕರೆಯಲಾಗುತ್ತದೆ ಎಂಬ ಅಂಶವನ್ನು ನಾವಿಲ್ಲಿ ಗಮನಿಸಬಹುದು.

     

    ಕಲ್ಲುಹೂವುಗಳು ಎಲ್ಲಿ ಬೆಳೆಯುತ್ತವೆ?

    ಭೂಮಿಯ ಮೇಲೆ ಬೆಳೆಯುವ ಯಶಸ್ವೀಪೂರ್ಣ ಜೀವಿಗಳಲ್ಲಿ ಕಲ್ಲುಹೂವುಗಳು (ಇಲ್ಲಿಂದಾಚೆಗೆ ಲೈಕನ್‌ಗಳು ಎಂದು ಕರೆಯಲಾಗುತ್ತದೆ) ಕೂಡ ಒಂದಾಗಿವೆ. ಜಗತ್ತಿನ ಎಲ್ಲಾ ಬಗೆಯ ಜೈವಿಕ ವಲಯಗಳಲ್ಲಿ ಅಂದರೆ ಆರ್ಕಟಿಕ್‌ನಿಂದ ಹಿಡಿದು ಅಂಟಾರ್ಕಟಿಕಾದವರೆಗಿನ ವಿವಿಧ ಬಗೆಯ ವಾತಾವರಣಗಳಲ್ಲಿ ಲೈಕನ್‌ಗಳ ಬೆಳವಣಿಯನ್ನು ನಾವು ಕಾಣಬಹುದಾಗಿದೆ. ಅವುಗಳನ್ನು ಕಲ್ಲುಹೂವುಗಳೆಂದು ಹೆಸರಿಸಲಾಗಿದ್ದರೂ ಅವುಗಳ ಬೆಳವಣಿಗೆ ಕಲ್ಲುಗಳಿಗೆ ಮಾತ್ರ ಸೀಮಿತವಾಗಿಲ್ಲ. ಸಾಮಾನ್ಯವಾಗಿ ಬಿಳಿ ಅಥವಾ ಬೂದು ಬಣ್ಣದಲ್ಲಿರುವ ಲೈಕನ್‌ಗಳು ಮರದ ಕಾಂಡಗಳು ಮತ್ತು ಬಂಡೆಗಳ ಮೇಲೆ ವೃತ್ತಾಕಾರವಾಗಿ ಬೆಳೆಯುತ್ತವೆ. ಅವುಗಳಲ್ಲಿ ಕೆಲವೊಂದು ಮರಗಳಿಂದ ಕೆಳಗೆ ನೇತಾಡುತ್ತಾ ಬೆಳೆದರೆ, ಮತ್ತೆ ಕೆಲವು ಬಂಡೆಗಳ ಮೇಲೆ ವರ್ಣರಂಜಿತ ಮೊಸಾಯಿಕ್ ಅನ್ನು ತಯಾರಿಸುತ್ತವೆ. ಸಾಮಾನ್ಯವಾಗಿ ಶಿಲ್ಪಗಳ ಮತ್ತು ದೇವಾಲಯದ ಗೋಡೆಗಳ ಮೇಲೂ ಕೂಡ ಇವುಗಳ ಬೆಳವಣಿಗೆಯನ್ನು ಕಾಣಬಹುದು. ಅಷ್ಟುಮಾತ್ರವಲ್ಲದೆ, ಎಲೆಗಳು, ಮಣ್ಣು, ಸಿಮೆಂಟಿನ ಪ್ಲಾಸ್ಟರ್‌ಗಳು, ಪ್ಲಾಸ್ಟಿಕ್ ಸಾಮಾನುಗಳು, ಗಾಜು ಮತ್ತು ಲೋಹದ ಸಾಮಗ್ರಿಗಳ ಮೇಲೂ ಸಹ ಬೆಳೆಯುವಷ್ಟು ಸಾಮರ್ಥ್ಯವನ್ನು ಈ ಲೈಕನ್‌ಗಳು ಹೊಂದಿವೆ.

     

    ಲೈಕನ್‌ಗಳಲ್ಲಿ ವೈವಿಧ್ಯತೆ

    ಇಡೀ ಜಗತ್ತಿನಲ್ಲಿ ಸರಾಸರಿ 20,000 ಲೈಕನ್ ಪ್ರಭೇದಗಳು ಮಾನವನ ಪರಿಚಯದ ಮಿತಿಗೆ ಒಳಪಟ್ಟಿವೆ. ಉಷ್ಣವಲಯದ ಪ್ರದೇಶಗಳು ಲೈಕನ್‌ಗಳಿಗೆ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತ ವೈವಿಧ್ಯತೆಯ ಆವಾಸಸ್ಥಾನವಾಗಿವೆ. ಭಾರತದಲ್ಲಿ ಲೈಕನ್‌ಗಳ 2,900 ಪ್ರಭೇದಗಳನ್ನು ದಾಖಲಿಸಲಾಗಿದೆ, ಅವುಗಳಲ್ಲಿ ಅಂದಾಜು 19% ದೇಶಕ್ಕೆ ಸ್ಥಳೀಯವಾಗಿವೆ. ಭಾರತದ ಭಾಗಗಳಾದ ಪಶ್ಚಿಮ ಘಟ್ಟಗಳು, ಹಿಮಾಲಯ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳು ಲೈಕನ್ ವೈವಿಧ್ಯತೆಯ ಹಾಟ್‌ಸ್ಪಾಟ್ ತಾಣಗಳೆಂದು ಪರಿಗಣಿಸಲಾಗಿದೆ.

     

    ಲೈಕನ್‌ಗಳ ಪ್ರಾಮುಖ್ಯತೆ

    ಪರಿಸರವ್ಯವಸ್ಥೆಯಲ್ಲಿ ಲೈಕನ್‌ಗಳ ಕೊಡುಗೆಗಳು: ಹೊಸ ಪರಿಸರ ವ್ಯವಸ್ಥೆಗಳನ್ನು ಸ್ಥಾಪಿಸುವಲ್ಲಿ ಲೈಕನ್‌ಗಳು ನಂಬಲಸಾಧ್ಯವಾದ ಪ್ರಾಧಾನ್ಯತೆಯನ್ನು ಪಡೆದಿರುತ್ತವೆ. ಅವುಗಳು ಬಂಡೆಯ ಮೇಲೆ ತಮ್ಮ ವಾಸಸ್ಥಾನವನ್ನು ಗಟ್ಟಿಗೊಳಿಸುವ ಮೂಲಕ ಪ್ರಪ್ರಥಮ ನಿವಾಸಿಗಳಾಗಿರುತ್ತವೆ. ನಂತರ, ಕಾಲ ಕ್ರಮೇಣವಾಗಿ ಅವುಗಳು ಬಂಡೆಯನ್ನು ಒಡೆದು ಮಣ್ಣಾಗಿ ಪರಿವರ್ತಿಸಿ ಇತರೆ ಸಸ್ಯಗಳ ಬೆಳವಣಿಗೆಗೆ ಸೂಕ್ತವಾದ ಸ್ಥಳವನ್ನು ರಚನೆಮಾಡುತ್ತವೆ. ಲೈಕನ್‌ಗಳನ್ನು ಅನೇಕ ಬಗೆಯ ಕೀಟಗಳು, ಬಸವನಹುಳುಗಳು, ಮೊಲಗಳು ಮತ್ತು ಜಿಂಕೆಗಳು ತಮ್ಮ ಆಹಾರದಂತೆ ಸೇವಿಸುತ್ತವೆ. ಪಕ್ಷಿಗಳು ತಮ್ಮ ಗೂಡುಗಳನ್ನು ಕಟ್ಟುವ ಸಂದರ್ಭದಲ್ಲಿ ಈ ಲೈಕನ್‌ಗಳನ್ನು ಬಳಸುತ್ತವೆ. ಲೈಕನ್‌ಗಳು ಮರೆಮಾಚುವ ಕೀಟಗಳಿಗೆ ಮತ್ತು ಕಪ್ಪೆಗಳಿಗೆ ಉತ್ತಮವಾದ ಹಿನ್ನೆಲೆಯನ್ನೂ ಸಹ ಒದಗಿಸುತ್ತವೆ.

     

    ಭಾರತೀಯ ಸಂಸ್ಕೃತಿಯಲ್ಲಿ ಮತ್ತು ನಮ್ಮ ಅಡುಗೆ ಮನೆಗಳಲ್ಲಿ ಲೈಕನ್‌ಗಳ ಅಸ್ತಿತ್ವ: ಅನಾದಿ ಕಾಲದಿಂದಲೂ ಲೈಕನ್‌ಗಳು ಭಾರತೀಯ ಸಂಸ್ಕೃತಿಯ ಒಂದು ಅವಿಭಾಜ್ಯ ಅಂಗವಾಗಿವೆ. ’ಹೋಮ, ಹವನದ ಸಾಮಗ್ರಿ’ಗಳಲ್ಲಿ, ’ಗರಂ ಮಸಾಲೆ ತಯಾರಿಸುವಲ್ಲಿ, ಮಾಂಸದ ಅಡುಗೆಗಳಿಗೆ ಬೇಕಾದ ಮಸಾಲೆಯನ್ನು ತಯಾರಿಸುವಲ್ಲಿ ಹಾಗೂ ಸಾಂಬಾರ್ ಮಸಾಲೆ’ ಗೆ ಈ ಲೈಕನ್‌ಗಳು ಅತ್ಯಂತ ಪ್ರಮುಖವಾದ ಪದಾರ್ಥವಾಗಿ ಬಳಕೆಯಲ್ಲಿವೆ. ಉತ್ತರ ಪ್ರದೇಶದಲ್ಲಿರುವ ಕನೌಜ್ ಎಂಬ ಪಟ್ಟಣದಲ್ಲಿ ’ಒಟ್ಟೊ, ಹಿನಾ ಅತ್ತರ್’ ಎಂಬ ಸಾಂಪ್ರದಾಯಿಕ ಸುಗಂಧ ದ್ರವ್ಯವನ್ನು ತಯಾರಿಸಲೆಂದು ಇಂದಿಗೂ ಕೂಡ ಲೈಕನ್‌ಗಳನ್ನು ಬಳಸಲಾಗುತ್ತಿದೆ. ಉತ್ತರಾಖಂಡದಲ್ಲಿರುವ ಗಡವಾಲಿ ಬುಡಕಟ್ಟು ಜನಾಂಗದವರು ಲೈಕನ್ ’ಬ್ಯುಲ್ಲಿಯಾ ಸಬ್ಸೊರೊರಿಯೋಯಿಡ್ಸ್’ ಅನ್ನು ’ಹೆನ್ನಾ, ಮೆಹಂದಿ’ ಯಂತೆ ಬಳಸುತ್ತಾರೆ. ಲಿಟ್ಮಸ್ ಪೇಪರ್ ತಯಾರಿಕೆಗಾಗಿ ಲೈಕನ್ ’ರೊಸೆಲ್ಲಾ ಮೊಂಟಾಗ್ನೀಸ್’ ಅನ್ನು ಬಳಸಲಾಗುತ್ತದೆ ಎಂಬ ಅಂಶವನ್ನು ನಾವಿಲ್ಲಿ ಗಮನಿಸಬಹುದು. ಲೈಕನ್‌ಗಳನ್ನು ಗುಡ್ಡಗಾಡು ಪ್ರದೇಶದಲ್ಲಿ ರೇಷ್ಮೆ ಮತ್ತು ಉಣ್ಣೆಯ ಬಟ್ಟೆಗಳಿಗೆ ಬಣ್ಣ ಹಾಕಲು ಬಳಸಲಾಗುತ್ತದೆ. ಉತ್ತರಖಂಡದ ಭೋಟಿಯಾ ಬುಡಕಟ್ಟು ಜನಾಂಗವು ’ಥಮ್ನೋಲಿಯಾ ವರ್ಮಿಕ್ಯುಲಾರೀಸ್’‌ ನ ಹೊಗೆಯನ್ನು ಕ್ರಿಮಿನಾಶಕದಂತೆ ಬಳಸುತ್ತಾರೆ ಹಾಗೂ ’ಉಸ್ನಿಯಾ ಲಾಂಗಿಸ್ಸಿಮಾ’ ವನ್ನು ತುಂಬುವ ಪದಾರ್ಥವನ್ನಾಗಿ (ಸ್ಟಫಿಂಗ್ ಮೆಟೀರಿಯಲ್) ಬಳಸುತ್ತಾರೆ. ಅರುಣಾಚಲ ಪ್ರದೇಶದ ’ಆದಿ’ ಎಂಬ ಬುಡಕಟ್ಟು ಜನಾಂಗದವರು ’ಲೆಪ್ಟೊಜಿಯಂ ಡೆಂಟಿಕ್ಯುಲಾಟಮ್’ ಅನ್ನು ತರಕಾರಿಯಾಗಿ ಬಳಸುತ್ತಾರೆ.

     

    ಲೈಕನ್‌ಗಳು ಔಷಧಿಯ ರೂಪದಲ್ಲಿ: ಆಫ್ರಿಕಾ, ಯುರೋಪ್, ಏಷ್ಯಾ (ಚೀನಾ, ಭಾರತ), ಓಷಿಯಾನಿಯಾ, ಉತ್ತರ ಅಮೇರಿಕಾ ಮತ್ತು ದಕ್ಷಿಣ ಅಮೇರಿಕಾದ ಸಂಸ್ಕೃತಿಗಳಲ್ಲಿ ಲೈಕನ್‌ಗಳನ್ನು ಔಷಧಿಗಳ ರೂಪದಲ್ಲಿ ಯಥೇಚ್ಛವಾಗಿ ಉಪಯೋಗಿಸಲಾಗಿದೆ ಎಂದು ಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ. ಭಾರತದ ವೇದಗಳಲ್ಲಿ ಲೈಕನ್‌ಗಳನ್ನು ಬೇರೆಬೇರೆ ಹೆಸರುಗಳಿಂದ ಕರೆಯಲಾಗುತ್ತಿತ್ತು, ಅಥರ್ವವೇದದಲ್ಲಿ (ಕ್ರಿ.ಪೂ. 1500) ’ಶಿಪಾಲ್’ ಎಂದು, ಸುಶ್ರುತಾ ಸಂಹಿತೆಯಲ್ಲಿ (ಕ್ರಿ.ಪೂ. 1000), ಚರಕ ಸಂಹಿತೆಯಲ್ಲಿ (ಕ್ರಿ.ಪೂ. 300-200) ಮತ್ತು ಹಲವಾರು ನಿಘಂಟುಗಳಲ್ಲಿ (ಕ್ರಿ.ಶ. 1100-1800) ’ಶೈಲಾಯ, ಶಿಲಾಪುಷ್ಪ್’ ಎಂದು ಹಾಗೂ ಆಯುರ್ವೇದದಲ್ಲಿ ’ಛಡಿಲಾ’ ಎಂದು ಉಲ್ಲೇಖಿಸಲಾಗಿದೆ. ಭಾರತೀಯ ಮಾರುಕಟ್ಟೆಗಳಲ್ಲಿ ಮಾರಾಟವಾಗುತ್ತಿರುವ  ’ಛಡಿಲಾ’ ಎಂಬ ಕಚ್ಚಾ ಔಷಧವು ಪಾರ್ಮೇಲಿಯಾದ ಹಲವಾರು ಪ್ರಬೇಧಗಳನ್ನು ಒಳಗೊಂಡಿದೆ. ರಕ್ತಸ್ರಾವ ತಡೆಗಟ್ಟುವ ಗುಣ, ಶಮನಕಾರಿ ಗುಣ, ಬೇಧಿಯನ್ನು ತಡೆಗಟ್ಟುವ ಗುಣ, ಜೀರ್ಣಾಂಗದ ವಾಯುವನ್ನು ಹೊರಹಾಕುವ ಗುಣ ಮತ್ತು ಕಾಮೋತ್ತೇಜನ ಗುಣಗಳು ಈ ಔಷಧಿಯಲ್ಲಿ ಅಡಗಿದೆ. ಅಲ್ಲದೆರಕ್ತ ಮತ್ತು ಹೃದಯದ ರೋಗಗಳು, ಹೊಟ್ಟೆಯ ಅಸ್ವಸ್ಥತೆಗಳು,  ರಕ್ತಸ್ರಾವದ ಮೂಲವ್ಯಾಧಿಗಳು, ತುರಿಕೆ, ಕುಷ್ಠರೋಗ, ಅತಿಯಾದ ಜೊಲ್ಲು ಸೋರುವಿಕೆ, ಗಂಟಲಿನ ನೋವು, ಹಲ್ಲು ನೋವು ಮತ್ತು ತಲೆ ನೋವುಗಳಲ್ಲಿ ಲೈಕನ್‌ಗಳು ಬಹಳ ಉಪಯುಕ್ತವಾಗುತ್ತವೆ ಎಂದು ಪರಿಗಣಿಸಲಾಗಿದೆ. ಲೈಕನ್‌ಗಳನ್ನು ಯುನಾನಿ ಮತ್ತು ಹೋಮಿಯೋಪತಿ ಔಷಧಗಳಲ್ಲಿಯೂ ಸಹ ಬಳಸಲಾಗುತ್ತದೆ. ಸಿಕ್ಕಿಂನ ನೇಪಾಳೀ ಬುಡಕಟ್ಟು ಜನಾಂಗದವರು ತಮಗಾದ ಗಾಯಗಳನ್ನು ಸೋಂಕಿನಿಂದ ರಕ್ಷಿಸಲು ಲೈಕನ್ ’ಹೆಟಿರೋಡರ್ಮಿಯಾ ಡಯಾಡೆಮಾಟಾ’ ವನ್ನು ಬಳಸುತ್ತಾರೆ; ಮಧ್ಯಪ್ರದೇಶದ ಗೋಂಡ್ ಮತ್ತು ಓರನ್ ಜನರು ಚರ್ಮದ ಖಾಯಿಲೆಗಳನ್ನು ವಾಸಿಮಾಡಲು ’ಪಾರ್ಮೋಟ್ರೆಮಾ ಸ್ಯಾಂಕ್ಟಿ-ಏಂಜೆಲಿಯೈ’ ಅನ್ನು ಬಳಸುತ್ತಾರೆ; ಉತ್ತರಖಂಡದ ಭೋಟಿಯಾ ಮತ್ತು ಗಡವಾಲಿ ಜನರು ’ಉಸ್ನಿಯಾ ಲಾಂಗಿಸ್ಸಿಮಾ’ವನ್ನು ಮೂಳೆ ಜೋಡಣೆ ಮಾಡಲೆಂದು ಪೋಲ್ಟೀಸ್ (ಕುದಿಹಿಟ್ಟಿನ ಕಟ್ಟು) ನಂತೆ ಬಳಸುತ್ತಾರೆ; ಉತ್ತರ ಸಿಕ್ಕಿಂ ಪ್ರದೇಶದಲ್ಲಿರುವ ಜನರು ಕೊಯ್ದ ಗಾಯಗಳಿಂದ ರಕ್ತಸ್ರಾವವನ್ನು ತಡೆಗಟ್ಟಲೆಂದು ’ಪೆಲ್ಟಿಜೆರಾ ಪಾಲಿಡ್ಯಾಕ್ಟೈಲಾ’ ವನ್ನು ಬಳಸುತ್ತಾರೆ.

     

    ಲೈಕನ್ ಸಾರಗಳ ಔಷಧೀಯ ಗುಣಗಳು: ಲೈಕನ್ ಸಾರಗಳನ್ನು ಆಂಟಿ ಮೈಕ್ರೋಬಿಯಲ್ (ಆಂಟಿ ಬ್ಯಾಕ್ಟೀರಿಯಲ್, ಆಂಟಿ ವೈರಲ್, ಆಂಟಿ ಫಂಗಲ್), ಆಂಟಿ ಆಕ್ಸಿಡೆಂಟ್, ಆಂಟಿ ಇನ್‌ಫ್ಲಾಮೇಟರಿ, ಆಂಟಿ ಪೈರೆಟಿಕ್, ಅನಾಲ್‌ಜೆಸಿಕ್, ಆಂಟಿ ಅಲ್ಸರ್, ಆಂಟಿ ಪ್ರೊಲಿಫೆರೇಟೀವ್ ಮತ್ತು ಸೈಟೋಟಾಕ್ಸಿಕ್ ನಂತಹ ಹಲವಾರು ಜೈವಿಕ ಚಟುವಟಿಕೆಗಳಲ್ಲಿ ಬಳಸಲಾಗುತ್ತದೆ. ಇತ್ತೀಚೆಗೆ, ಬೊಜ್ಜು ನಿವಾರಿಕೆಗಾಗಿ, ಯಕೃತ್ ರೋಗಗಳಿಗೆ ಮತ್ತು ಹೃದಯ ರೋಗಗಳ ವಿರುದ್ಧ ಸಂಶೋಧಕರು ಈ ಲೈಕನ್‌ಗಳ ಸಾರಗಳನ್ನು ಪರೀಕ್ಷಿಸುತ್ತಿದ್ದಾರೆ. ಚಿನ್ನ ಮತ್ತು ಬೆಳ್ಳಿಯ ನ್ಯಾನೊಪಾರ್ಟಿಕಲ್‌ಗಳನ್ನು ಅಭಿವೃದ್ಧಿಪಡಿಸಲು ಲೈಕನ್ ಸಾರಗಳನ್ನು ಬಳಸಲಾಗುತ್ತಿದೆ. ಈ ನ್ಯಾನೊಪಾರ್ಟಿಕಲ್‌ಗಳು ಆಂಟಿ ಮೈಕ್ರೋಬಿಯಲ್, ಕೋರಂ ಸೆನ್ಸರ್‌ ಮತ್ತು ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿವೆ. ಲೈಕನ್‌ಗಳು 1,000 ಕ್ಕಿಂತ ಹೆಚ್ಚಿನ ದ್ವಿತೀಯ ಚಯಾಪಚಯಗಳನ್ನು ಉತ್ಪಾದಿಸುತ್ತವೆ, ಅವುಗಳಲ್ಲಿ 50-60 ಪ್ರಬೇಧಗಳನ್ನು ಹೊರತುಪಡಿಸಿ ಉಳಿದೆಲ್ಲವೂ ಕೇವಲ ಲೈಕನ್‌ಗಳಲ್ಲೇ ದೊರೆಯುತ್ತವೆ. ಈ ದ್ವಿತೀಯ ಚಯಾಪಚಯಗಳು ಬಹುತೇಕ ಜೈವಿಕ ಚಟುವಟಿಕೆಗಳಿಗೆ ಕಾರಣವಾಗಿವೆ.

     

    ವಾಯುಮಾಲಿನ್ಯ ಸೂಚಕವಾಗಿ ಲೈಕನ್‌ಗಳು: ಲೈಕನ್‌ಗಳು ಗಾಳಿಯ ಗುಣ ಮಟ್ಟದಲ್ಲಿನ ಬದಲಾವಣೆಗಳಿಗೆ ಸೂಕ್ಷ್ಮವಾಗಿವೆ. ಹಾಗಾಗಿ ಅವುಗಳನ್ನು ವಾಯು ಮಾಲಿನ್ಯದ ಅತ್ಯುತ್ತಮ ಜೈವಿಕ ಸೂಚಕವಾಗಿ ಪರಿಗಣಿಸಲಾಗಿದೆ. ಬಣ್ಣ ಬದಲಾಯಿಸುವ ಮೂಲಕ, ಜೀವನಾಧಾರದಿಂದ ಕಿತ್ತು ಬರುವ ಮೂಲಕ ಮತ್ತು ಸೂಕ್ಷ್ಮ ಪ್ರಭೇದಗಳು ಕಣ್ಮರೆಯಾಗುವ ಮೂಲಕ ಲೈಕನ್‌ಗಳು ವಾಯು ಮಾಲಿನ್ಯವನ್ನು ಸೂಚಿಸುತ್ತವೆ. ಹಾಗಂದ ಮಾತ್ರಕ್ಕೆ ಎಲ್ಲಾ ಲೈಕನ್‌ಗಳು ಸೂಕ್ಷ್ಮತೆಯಿಂದ ಕೂಡಿರುವುದಿಲ್ಲ, ಕೆಲವೊಂದು ಪ್ರಭೇದಗಳು ಸಹಿಷ್ಣುತಾ ಗುಣದಿಂದ ಕೂಡಿರುತ್ತವೆ, ಹಾಗಾಗಿ ಅವು ತಮ್ಮ ದೇಹದಲ್ಲಿ ವಾಯು ಮಾಲಿನ್ಯಕಾರಕಗಳನ್ನು ಶೇಖರಿಸಿಡುವ ಸಾಮರ್ಥ್ಯವನ್ನು ಹೊಂದಿವೆ. ಗಾಳಿಯಲ್ಲಿ ವಿಷಕಾರಿ ಮಾಲಿನ್ಯಕಾರಕಗಳು ಇರುವುದನ್ನು ಪ್ರಯೋಗ ಶಾಲೆಯಲ್ಲಿ ನಡೆಸಲಾದ ಲೈಕನ್‌ಗಳ ವಿಶ್ಲೇಷಣೆಯಿಂದ ತಿಳಿದುಬರುತ್ತದೆ. ದೇಹದ ಮೇಲಿನ ರಕ್ಷಣಾತ್ಮಕ ಪದರದ ಅನುಪಸ್ಥಿತಿ, ತೇವಾಂಶವನ್ನು ಹೀರುವ ಶಕ್ತಿ ಮತ್ತು ಪೌಷ್ಟಿಕಾಂಶಕ್ಕಾಗಿ ವಾತಾವರಣದ ಮೇಲೆ ಅವಲಂಬನೆ ಲೈಕನ್‌ಗಳು ವಾಯುಮಾಲಿನ್ಯಕ್ಕೆ ಸಂವೇದನಾಶೀಲವಾಗಿರುವುದರ ಹಿಂದಿನ ಮುಖ್ಯ ಕಾರಣಗಳಾಗಿವೆ. ಶಿಲೀಂಧ್ರಕ್ಕೆ ಹೋಲಿಸಿ ನೋಡಿದಾಗ, ಲೈಕನ್‌ಗಳಲ್ಲಿ ಪಾಚಿಯು ಕಡಿಮೆ ಸಂಖ್ಯೆಯಲ್ಲಿರುವುದರಿಂದ ಅವುಗಳ ಸಾವು ಇಡೀ ಲೈಕನ್‌ನ ನಾಶಕ್ಕೆ ಕಾರಣವಾಗುತ್ತದೆ.

     

    ಲೈಕನ್‌ಗಳ ಇತರೆ ಬಳಕೆಗಳು: ಸೂಕ್ಷ್ಮ ಹವಾಮಾನ ಪರಿಸ್ಥಿತಿಗಳಲ್ಲಿ ಉಂಟಾಗುವ ಬದಲಾವಣೆಗಳಿಗೂ ಕೂಡ ಲೈಕನ್‌ಗಳು ಬಹುಬೇಗನೇ ಸ್ಪಂದಿಸುತ್ತವೆ, ಇದರಿಂದಾಗಿ ಅವುಗಳನ್ನು ಹವಾಮಾನ ಬದಲಾವಣೆಯ ಅಧ್ಯಯನಗಳಲ್ಲಿಯೂ ಸಹ ಬಳಸಲಾಗುತ್ತದೆ. ಹವಾಮಾನ ಬದಲಾವಣೆ ಸಂದರ್ಭದಲ್ಲಿ ಕೆಲವು ಲೈಕನ್‌ಗಳ ಸೂಕ್ಷ್ಮ ಪ್ರಭೇದಗಳು ತಂಪಾದ ಸಮಶೀತೋಷ್ಣ ಪ್ರದೇಶಗಳಿಗೆ ವಲಸೆಹೋಗುವುದು ಮತ್ತು ಬೆಚ್ಚಗಿನ ಹವಾಮಾನಕ್ಕೆ ಆದ್ಯತೆ ನೀಡುವ ಪ್ರಭೇದಗಳು ಉಷ್ಣವಲಯದ ಪ್ರದೇಶಗಳನ್ನು ಆಕ್ರಮಿಸುವುದನ್ನು ನಾವು ಕಾಣಬಹುದು. ಲೈಕನ್‌ಗಳು ತುಂಬಾ ನಿಧಾನವಾಗಿ ಬೆಳೆಯುವ ಜೀವಿಯಾಗಿದ್ದು, ತನ್ನ ದೇಹದ ಗಾತ್ರದಿಂದ ಲೈಕನ್‌ಗಳು ತಮ್ಮ ವಯಸ್ಸನ್ನು ಸೂಚಿಸುತ್ತದೆ. ಲೈಕನೋಮೆಟ್ರಿ ಎಂಬುದು ಒಂದು ತಂತ್ರವಾಗಿದ್ದು, ಅದರಿಂದ ಲೈಕನ್‌ಗಳ ವಯಸ್ಸನ್ನು ಲೆಕ್ಕಹಾಕಲಾಗುತ್ತದೆ ಮತ್ತು ಅದರ ಮುಖಾಂತರ ಅವುಗಳು ಬೆಳೆಯುವ ಬಂಡೆಯ ವಯಸ್ಸನ್ನು ಲೆಕ್ಕಹಾಕಲಾಗುತ್ತದೆ. ಹಳೆಯ ಪರಿಸರದ ರಚನೆಗೆ, ಹಿಮದ ನೀರ್ಗಲ್ಲಿನ ಹಿಮ್ಮೆಟ್ಟಿಸುವ ಚಲನೆಯ ದರವನ್ನು ಅಂದಾಜಿಸಲು ಮತ್ತು ಭೂಕುಸಿತಗಳ ಆವರ್ತನಗಳನ್ನು ಲೆಕ್ಕಹಾಕಲು ಈ ಲೈಕನೋಮೆಟ್ರಿ ತಂತ್ರವು ಬಹಳ ಉಪಯುಕ್ತವಾಗಿದೆ. ಕಾಡಿನ ಆರೋಗ್ಯವನ್ನು ಸೂಕ್ಷ್ಮವಾಗಿ ಗ್ರಹಿಸಲು ಲೈಕನ್‌ಗಳನ್ನು ಅರಣ್ಯಶಾಸ್ತ್ರದಲ್ಲಿ ಬಳಸಲಾಗುತ್ತದೆ.

     

    ಲೈಕನ್‌ಗಳ ಸಂರಕ್ಷಣೆ

    ಈ ಹಿಂದೆ ತಿಳಿಸಿರುವಂತೆ, ಲೈಕನ್‌ಗಳು ಅತಿ ನಿಧಾನವಾಗಿ ಬೆಳೆಯುವ ಜೀವಿಗಳಾಗಿದ್ದು, ಒಂದು ಪ್ರದೇಶದಲ್ಲಿ ತಮ್ಮ ಅಸ್ತಿತ್ವವನ್ನು ಸ್ಥಾಪಿಸಲಿಕ್ಕಾಗಿ ಅವು ಹಲವಾರು ವರ್ಷಗಳ ಅವಧಿಯನ್ನೇ ತೆಗೆದುಕೊಳ್ಳುತ್ತವೆ. ಮಸಾಲೆಪದಾರ್ಥಗಳು ಮತ್ತು ಇತರೆ ಉದ್ದೇಶಗಳಿಗಾಗಿ ಬಳಕೆಯಾಗುತ್ತಿರುವ ಅಪಾರ ಪ್ರಮಾಣದ ಲೈಕನ್‌ಗಳನ್ನು ಹಿಮಾಲಯ ಮತ್ತು ಪಶ್ಚಿಮಘಟ್ಟಗಳಿಂದ ಸಂಗ್ರಹಿಸಲಾಗುತ್ತದೆ. ಇದು ಲೈಕನ್‌ಗಳ ವೈವಿಧ್ಯತೆಯ ಅಳಿವಿನಂಚಿಗೆ ತಳ್ಳಿದೆ. ಲೈಕನ್‌ಗಳನ್ನು ಕಾಡಿನ ತ್ಯಾಜ್ಯ ಎಂದು ಪರಿಗಣಿಸಲಾಗುತ್ತದೆ, ಹಾಗಾಗಿ, ಅವುಗಳನ್ನು ಶೇಖರಿಸುವುದಕ್ಕೆ ಸಂಬಂಧಿಸಿದಂತೆ ಯಾವುದೇ ಬಗೆಯ ಕಟ್ಟುನಿಟ್ಟಿನ ನಿಯಮಗಳು ರಚನೆಯಾಗಿಲ್ಲ. ಸಸ್ಯಗಳಿಗಿಂತ ಭಿನ್ನವಾಗಿರುವ ಲೈಕನ್‌ಗಳನ್ನು ಕೈದೋಟದಲ್ಲಿ ಅಥವಾ ಪ್ರಯೋಗ ಶಾಲೆಗಳಲ್ಲಿ ಬೆಳೆಯಲು ಸಾಧ್ಯವಿಲ್ಲ. ಜೈವಿಕ ವಿಜ್ಞಾನದ ಅಧ್ಯಯನಗಳಿಗೆ ಅಗಾಧ ಮಟ್ಟದ ಜೀವರಾಶಿಯ ಅಗತ್ಯವಿದೆ. ಆದ್ದರಿಂದ, ದೊಡ್ಡ ಪ್ರಮಾಣದಲ್ಲಿ ಲಭ್ಯವಿರುವ ಲೈಕನ್‌ಗಳನ್ನು ಬಹುತೇಕ ಜೈವಿಕ ವಿಜ್ಞಾನದ ಅಧ್ಯಯನಗಳಿಗೆ  ಸೀಮಿತಗೊಳಿಸಲಾಗಿದೆ. ಉದ್ದೇಶಿತ ಕಣಗಳ ಉತ್ಪಾದನೆಗಾಗಿ ಲೈಕನ್‌ಗಳ ಶಿಲೀಂಧ್ರ ಭಾಗವನ್ನು ಬೆಳೆಸುವುದು ಸಾಧ್ಯವಾಗಿದ್ದರೂ ಇದು ಅತ್ಯಂತ ಕಠಿಣ ಪ್ರಯೋಗವಾಗಿದೆ. ಬಹುತೇಕ ಸಂದರ್ಭಗಳಲ್ಲಿ ಈ ರೀತಿಯ ಪ್ರಯೋಗಗಳಲ್ಲಿ ಸಿಗುವ ಯಶಸ್ಸಿನ ಪ್ರಮಾಣವು ಕಡಿಮೆಯಾಗಿದೆ.

     

    ತಮ್ಮ ಸ್ವಭಾವದಲ್ಲೇ ಅನೇಕ ವಿಶಿಷ್ಟತೆಗಳು ಮತ್ತು ಮಾನವಕುಲಕ್ಕೆ ಅಗತ್ಯವಿರುವ ಉಪಯುಕ್ತತೆಯ ಗುಣಗಳಿಂದ ಕೂಡಿರುವ ಕಾರಣ ಲೈಕನ್‌ಗಳು ಮಾನವನಿಗೆ ಪ್ರಕೃತಿಯ ಅನೋನ್ಯ ಉಡುಗೊರೆಯಾಗಿದೆ. ಅತ್ಯಂತ ವಿಶಿಷ್ಟವಾದ ರಾಸಾಯನಿಕ ತತ್ವಗಳನ್ನು ಹೊಂದಿರುವ ಕಾರಣ ಈ ಲೈಕನ್‌ಗಳು ಔಷಧೀಗಳಿಗೆ ಚಿನ್ನದ ಗಣಿಯಾಗಿದೆ. ಮಾನವನು ತನ್ನ ಉಪಯೋಗಗಳಿಗಾಗಿ ಇವುಗಳನ್ನು ಅತಿಯಾಗಿ ಬಳಸುತ್ತಿರುವುದರಿಂದ ಅವುಗಳು ಅಳಿವಿನಂಚಿನಲ್ಲಿದ್ದು, ಅಪಾಯದ ಸ್ಥಿತಿಗೆ ತಲುಪಿರುತ್ತವೆ. ಇವುಗಳ ಸಂರಕ್ಷಣೆಗೆ ಅಗತ್ಯವಿರುವ ಸೂಕ್ತ ಮಾರ್ಗಸೂಚಿಗಳಿಂದ ಕೂಡಿದ ನಿಯಮಪಾಲನೆಗಳನ್ನು ಸರ್ಕಾರದ ನೀತಿರಚನಾಕಾರರು ಜನರಿಗೆ ಪರಿಚಯಿಸಬೇಕಾಗಿದೆ. ಲೈಕನ್‌ಗಳನ್ನು ಶೇಖರಿಸುವ ಕಾರ್ಯವನ್ನು ನಿಯಂತ್ರಿಸಬೇಕಾಗಿದೆ. ಎಲ್ಲಾ ಹಂತದಲ್ಲಿರುವ ಬಳಕೆದಾರರಿಗೆ ಈ ಲೈಕನ್‌ಗಳ ಬಗ್ಗೆ ಅರಿವು ಮೂಡಿಸಿ, ಜಾಗೃತಗೊಳಿಸಿ ಲೈಕನ್‌ಗಳನ್ನು ಸಂರಕ್ಷಿಸಬೇಕಾಗಿದೆ.

    ಚಿತ್ರ 1. ಎವರ್ನಿಯಾಸ್ಟ್ರಮ್ ಸಿರ್‌ಹ್ಯಾಟಂ, ಮಸಾಲೆ ಪದಾರ್ಥವಾಗಿ ಬಳಸಲಾಗುವ ಒಂದು ಲೈಕನ್‌

     

      ಚಿತ್ರ 1. ಎವರ್ನಿಯಾಸ್ಟ್ರಮ್ ಸಿರ್‌ಹ್ಯಾಟಂ, ಮಸಾಲೆ ಪದಾರ್ಥವಾಗಿ ಬಳಸಲಾಗುವ ಒಂದು ಲೈಕನ್‌

     

     

     

     

     

    ಡಾ. ಸಂಜೀವ ನಾಯಕ, ಹಿರಿಯ ಪ್ರಧಾನ ವಿಜ್ಞಾನಿ

    ಸಿಎಸ್‌ಐಆರ್- ನ್ಯಾಷನಲ್ ಬೊಟಾನಿಕಲ್ ರೀಸರ್ಚ್ ಇನ್ಸ್‌ಟಿಟ್ಯೂಟ್, ರಾಣಾ ಪ್ರತಾಪ್ ಮಾರ್ಗ್, ಲಖ್ನೋ – 260001, ಉತ್ತರ ಪ್ರದೇಶ

     

     

    Share. Facebook Twitter Pinterest LinkedIn Reddit Email
    Editors Picks

    मनुष्य को अपने तन्त्र से बाहर भी कर सकती है, भविष्य की पृथ्वी

    January 6, 2024

    कृषि, खाद्य सुरक्षा और किसान आंदोलन

    July 24, 2022

    Restoring Ecosystems For Cultural, Economic And Ecological Benefits

    July 21, 2022

    छूटी राहों और टूटे धागों की तलाश

    July 19, 2022

    Subscribe to News

    Get the latest sports news from NewsSite about world, sports and politics.

    Advertisement

    About Us

    Links

    • Print Edition
    • Get In Touch
    • About Us

    Contact Us

    • Address: Office No. 04, 1st Floor, Eldeco Xpress Plaza, Uttrathia Raebareli Road, Lucknow Uttar Pradesh, India
    • Email: kahaarmagazine@gmail.com
    • Phone: +91-7011218367

    Powdered By : Bachpan Creation

    Type above and press Enter to search. Press Esc to cancel.